ಸ್ಟಿವನ್‍ಸನ್, ರಾಬರ್ಟ್ ಲೂಯಿ
	1850-94. ಸ್ಕಾಟಿಷ್ ಕಾದಂಬರಿಕಾರ, ಪ್ರಬಂಧಕಾರ ಹಾಗೂ ಕವಿ. ಟ್ರೆಷರ್ ಐಲೆಂಡ್ ಮತ್ತು ಕಿಡ್ನಾಪ್ಡ್ ಎಂಬ ಎರಡು ಸಾಹಸ ಕಥಾನಕಗಳಿಂದಾಗಿ ಪ್ರಪಂಚ ಪ್ರಸಿದ್ಧನಾಗಿದ್ದಾನೆ. ಈತ 1850 ನವೆಂಬರ್ 13ರಂದು ಎಡಿನ್‍ಬರೋ ಎಂಬಲ್ಲಿ ಜನಿಸಿದ. ಇವನನ್ನು ಎಂಜಿನಿಯರ್ ಮಾಡಬೇಕೆಂಬುದು ಮನೆಯವರ ಅಭಿಲಾಷೆಯಾಗಿತ್ತು. ಆದರೆ ಚಿಕ್ಕಂದಿನಿಂದಲೇ ಆರಂಭವಾದ ಶ್ವಾಸಕೋಶಕ್ಕೆ ಸಂಬಂಧಿಸಿದ ಅನಾರೋಗ್ಯದಿಂದಾಗಿ ಅದು ಸಾಧ್ಯವಾಗಲಿಲ್ಲ (ಮುಂದೆ ಇದು ಕ್ಷಯರೋಗವಾಗಿ ಇವನನ್ನು ಜೀವನ ಪರ್ಯಂತ ಕಾಡಿತು). ಈತ ಕಾನೂನು ವ್ಯಾಸಂಗಮಾಡಿ ಎಡಿನ್‍ಬರೋ ವಿಶ್ವವಿದ್ಯಾಲಯದಿಂದ 1875ರಲ್ಲಿ ಪದವಿ ಪಡೆದನಾದರೂ ವಕೀಲಿ ವೃತ್ತಿ ಕೈಗೊಳ್ಳಲಿಲ್ಲ. ಬರೆವಣಿಗೆಗೆ ತೊಡಗಿದ. 1876ರಲ್ಲಿ ಪ್ಯಾರಿಸಿನಲ್ಲಿ ಈತನಿಗೆ ಫ್ಯಾನಿ ಆಸ್‍ಬೊರ್ನ್ ಎಂಬ ವಿವಾಹಿತ ಮಹಿಳೆಯ ಪರಿಚಯವಾಗಿ, ಪರಿಚಯ ಪ್ರಣಯಕ್ಕೆ ತಿರುಗಿತು. ಆಕೆ ಸ್ಟಿವನ್‍ಸನ್‍ಗಿಂತ ಹನ್ನೊಂದು ವರ್ಷ ದೊಡ್ಡವಳು; ಎರಡು ಮಕ್ಕಳ ತಾಯಿ. ಆಕೆಯನ್ನು ಮದುವೆಯಾಗಲು ಮನೆಯವರ ವಿರೋಧüವಿದ್ದರೂ ಸ್ಟಿವನ್‍ಸನ್ 1880ರಲ್ಲಿ ಓಕ್‍ಲೆಂಡಿನಲ್ಲಿ ಅವಳನ್ನು ಮದುವೆಯಾದ. ಅದೇ ವರ್ಷ ಸ್ಕಾಟ್ಲೆಂಡಿಗೆ ಮರಳಿದ. ಅನಂತರ ಸುಮಾರು ಏಳು ವರ್ಷಗಳ ಕಾಲ ತನ್ನ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಯುರೋಪಿನಾದ್ಯಂತ ಸಂಚರಿಸಿ 1887ರಲ್ಲಿ ಅಮೆರಿಕಕ್ಕೆ ಬಂದು ಸ್ಯಾನ್‍ಫ್ರಾನ್ಸಿಸ್ಕೊದಲ್ಲಿ ನೆಲಸಿದ. ಈ ವೇಳೆಗಾಗಲೇ ಆರೋಗ್ಯವೂ ತಕ್ಕಮಟ್ಟಿಗೆ ಸುಧಾರಣೆಯಾಗಿತ್ತು. 1888ರಲ್ಲಿ ಕುಟುಂಬ ಸಮೇತ ಸೌತ್‍ಸೀಸ್ ಕಡೆಗೆ ಪ್ರಯಾಣ ಬೆಳೆಸಿ ಸುಮಾರು ಆರು ವರ್ಷಗಳಕಾಲ ಅನೇಕ ದ್ವೀಪಗಳಲ್ಲಿ ಸಂಚರಿಸಿದ. ಕಡೆಗೆ ಸಮೂಹ ದ್ವೀಪಗಳಲ್ಲೊಂದಾದ ಅಪಿಯ ಎಂಬಲ್ಲಿ ಸ್ವಲ್ಪ ಜಮೀನುಕೊಂಡು ಪ್ಲಾಂಟರ್ ಆಗಿ ಅಲ್ಲೇ ನೆಲಸಿದ. ಅನಂತರ ಆ ದ್ವೀಪದ ಆಗುಹೋಗುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ. ಇವನ ಕಾಲದ ಬರೆಹಗಾರರಲ್ಲಿ ದ್ವೀಪವಾಸಿಗಳ ಜೀವನದ ಸ್ಥಿತಿಗತಿಗಳನ್ನು ಇವನಷ್ಟು ಅರಿತಿದ್ದವರು ಬಹಳ ಕಡಿಮೆ. ಇವನ ಜೀವನದ ಸಂಧ್ಯಾಕಾಲ  ದುರಂತಮಯವಾಗಿತ್ತು. ಹೆಂಡತಿ ಚಿತ್ತಭ್ರಮಣೆಯಿಂದ ಬಳಲಿದಳು. ಈ ಘಟನೆ ಈತನನ್ನು ಬಹುವಾಗಿ ಕಾಡಿತು. ಈತ ಅದೇ ವ್ಯಥೆಯಲ್ಲಿ 1894 ಡಿಸೆಂಬರ್ 3ರಂದು  ನಿಧನಹೊಂದಿದ. ಇವನ ಕಥನ ಕಲೆಯನ್ನು ಮೆಚ್ಚಿಕೊಂಡ ಸಮೋಹ ದ್ವೀಪ ನಿವಾಸಿಗಳು ಇವನನ್ನು ತುಸಿತಲ (ಕಥೆಗಾರ) ಎಂಬ ಬಿರುದಿನಿಂದ ಕರೆದು ಗೌರವಿಸಿದರು. 

	ಸ್ಟಿವನ್‍ಸನ್‍ಗೆ ಚಿಕ್ಕಂದಿನಿಂದಲೂ ಸಾಹಿತ್ಯ ಹಾಗೂ ಚರಿತ್ರೆ ಈ ವಿಷಯಗಳ ಬಗ್ಗೆ ಅಪಾರವಾದ ಒಲವಿತ್ತು. ಅದರಲ್ಲಿಯೂ ಸ್ಕಾಟಿಷ್ ಚರಿತ್ರೆಯ ಬಗ್ಗೆ ವಿಶೇಷವಾದ ಪ್ರೀತಿಯಿತ್ತು. ಹಾಗಾಗಿ ಸ್ಕಾಟಿಷ್ ಚರಿತ್ರೆ ಇವನ ಬಹುಪಾಲು ಕಾದಂಬರಿಗಳಿಗೆ ಹಿನ್ನೆಲೆಯೊದಗಿಸಿದೆ. ಈತ 1870ರ ದಶಕದಲ್ಲಿ ಬರೆವಣಿಗೆಗೆ ತೊಡಗಿ ಅನೇಕ ಸಣ್ಣಕಥೆಗಳನ್ನು, ಪ್ರಬಂಧಗಳನ್ನು ಪ್ರಕಟಿಸಿದ. ಇವನ ಮೊದಲ ಕೃತಿ ಎನ್ ಐಲೆಂಡ್ ವಾಯೆಜ್ 1878ರಲ್ಲಿ ಪ್ರಕಟವಾಯಿತು. ಈತ ಅನೇಕ ಕಾದಂಬರಿಗಳನ್ನೂ ಸಣ್ಣಕಥೆಗಳನ್ನೂ ಪ್ರಬಂಧಗಳನ್ನೂ ಪ್ರವಾಸಕಥನಗಳನ್ನೂ ಬರೆದಿದ್ದಾನೆ. ಟ್ರೆಷರ್ ಐಲೆಂಡ್(1883), ದಿ ಸ್ಟ್ರೇಂಜ್ ಕೇಸ್ ಆಫ್ ಡಾಕ್ಟರ್ ಜೆಕಿಲ್ ಅಂಡ್ ಮಿಸ್ಟರ್ ಹೈಡ್ (1886), ಕಿಡ್ನಾಪ್ಡ್(1886), ದಿ ಮಾಸ್ಟರ್ ಆಫ್ ಬ್ಯಾಲನ್‍ಟ್ರೆ(1889)-ಇವು ಇವನ ಮುಖ್ಯ ಕಾದಂಬರಿ ಗಳು. ಗುಪ್ತನಿಧಿಯೊಂದನ್ನು ಹುಡುಕುವ ರೋಮಾಂಚಕ ಕಥಾನಕ ವನ್ನುಳ್ಳ ಟ್ರೆಷರ್ ಐಲೆಂಡ್ ಈತನ ಸುಪ್ರಸಿದ್ಧ ಕೃತಿ. ಇದು ಚಲನಚಿತ್ರವಾಗಿಯೂ ಖ್ಯಾತಿಗಳಿಸಿದೆ. ಕೊಲೆಯ ಘಟನೆಯೊಂದರ ಸುತ್ತ ಹೆಣೆಯಲ್ಪಟ್ಟಿರುವ ಕಿಡ್ನಾಪ್ಡ್ ಇವನ ಅತ್ಯುತ್ತಮ ಕಾದಂಬರಿಗಳಲ್ಲೊಂದೆಂದು ಹೆಸರು ಪಡೆದಿದೆ. ನ್ಯೂ ಅರೇಬಿಯನ್ ನೈಟ್ಸ್(1882), ಮೋರ್ ನ್ಯೂ ಅರೇಬಿಯನ್ ನೈಟ್ಸ್(1885) - ಇವು ಸಣ್ಣಕಥಾ ಸಂಕಲನಗಳು. ವರ್ಜಿನಿಬಸ್ ಪ್ಯೂರಿಸ್ಕ್ ಅಂಡ್ ಅದರ್ ಪೇಪರ್ಸ್(1881), ಫೆಮಿಲಿಯರ್ ಸ್ಟಡೀಸ್ ಆಫ್ ಮೆನ್ ಅಂಡ್ ಬುಕ್ಸ್(1882), ಮೆಮೊರೀಸ್ ಅಂಡ್ ಪೋಟ್ರೈಟ್ಸ್(1887) - ಇವು ಪ್ರಬಂಧ ಸಂಕಲನಗಳು. ಅಮೆಚೂರ್ ಎಮಿಗ್ರೆಂಟ್(1880), ಇನ್ ದಿ ಸೌತ್‍ಸೀಸ್(1890), ಅಕ್ರಾಸ್ ದಿ ಪ್ಲೈನ್ಸ್(1892) - ಇವು ಪ್ರವಾಸ ಕಥನಗಳು. ಇಂಗ್ಲಿಷ್ ಸಾಹಿತ್ಯದಲ್ಲಿ  ಇವನ ಪ್ರಬಂಧಗಳಿಗೆ ಎತ್ತರದ ಸ್ಥಾನ ಲಭ್ಯವಾಗಿದ್ದು ಈತನನ್ನು ಚಾಲ್ರ್ಸ್ ಲ್ಯಾಂಬ್, ವಿಲಿಯಮ್ ಹ್ಯಾಸ್‍ಲಿತ್ - ಈ ಪ್ರಬಂಧಕಾರರ ಸಾಲಿಗೆ ಸೇರಿಸಲಾಗುತ್ತದೆ.					
				*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ